Radha Iyer

Click here to edit subtitle

Blog

5.

Posted by [email protected] on March 14, 2014 at 12:50 AM Comments comments (0)

 

ಪ್ರೀತಿ ಹಸಿರಾಗುವೆ


ಒಂದೇ ಒಂದು ಬಾರಿ

ನುಡಿಯೆ ಆ ಪ್ರೀತಿ ಪಲ್ಲವಿಯ

ಒಂದೇ ಒಂದು ಬಾರಿ

ಬರೆಯೆ ಆ ಪ್ರೀತಿ ಕವಿತೆಯಾ...

ನಾ ಪ್ರೇಮ ಪದವಾಗುವೆ

ನಿನ್ನ ಕವನದುಸಿರಾಗುವೆ

ಆ ಕನಸನೆಲ್ಲ ಕದಿವೆ

ನಿನ್ನ ಮನಸ ಮಾತಾಗುವೆ

ಪ್ರೀತಿ ಹಸಿರಾಗುವೆ

 

 

ನೀನಿರದೆ ಹೇಗಿರಲಿ?

ಎಂದು ಕೇಳಿದೆ ಪ್ರಾಣ

ನಿನ್ನ ಹೆಜ್ಜೆ ಸವಿಯುವುದೆ

ಪಾದ ಹೇಳಿದೆ ಪಯಣ

ನಿನ್ನ ಮರೆತು ಹೋದ ಆ ಕ್ಷಣ

ಜಗವೆಲ್ಲ ಶೂನ್ಯವೆ

ನಿನ್ನ ಕಲೆತು ಹೋದ ಈ ದಿನ

ತೊರೆಯಲು ಸಾಧ್ಯವೆ?

ನನ್ನ ಹೃದಯ ಬಡಿತಗಳಲಿ

ನಿನ್ನ ಹೆಸರನೊಮ್ಮೆ ಕರೆವೆ

ಆ ಕರೆಯ ಮಿಡಿತಗಳಲಿ

ನಿನ್ನ ಉಸಿರನೊಮ್ಮೆ ಬೆರೆವೆ

ಪ್ರೀತಿ ಸ್ವರವಾಗುವೆ

 

 

ಚಂದಿರನ ಎದೆಯೊಳಗೆ

ಮನೆಯ ಮಾಡೋಣ ಒಂದು

ಯಾರಿರದ ಲೋಕದಲಿ

ಸೇರಿ ಬಾಳೋಣ ಇಂದು

ನೀನಿರಲು ನನ್ನ ಹತ್ತಿರ

ನೆನಪುಗಳೆ ಬೇಡವೆ

ಕಣ್ ರೆಪ್ಪೆಯೊಳಗೆ ಬಚ್ಚಿಟ್ಟು

ನಿನ್ನ ಕೊನೆವರೆಗು ಕಾಯುವೆ

ನನ್ನ ರೋಮ ರೋಮಗಳಲಿ

ನಿನ್ನ ರೇಖೆ ನಾ ಬಿಡಿಸುವೆ

ನನ್ನ ಕನಸ ಬಣ್ಣ ತುಂಬಿ

ನಿನ್ನ ರೂಪ ಸಿಂಗರಿಸುವೆ

ಪ್ರೀತಿ ರಂಗಾಗುವೆ

 

4. (Tune: Dil Ko Tumse Pyar Hua)

Posted by [email protected] on August 4, 2013 at 5:20 AM Comments comments (0)

 

ಒಲವೇ ಮೊದಲ ಬಾರಿಗೆ

ನಿನ್ನಯ ಹೆಸರಿಗೆ

ಹೃದಯವ ಬರೆದೆನೆ...

ನಿನ್ನಾ ಮನಸಿನ ಊರಿಗೆ

ತೆರಳುವ ಬಯಕೆಗೆ

ಕಾತರ ತಾಳೆನೆ...

ಕನಸಿನ... ಮನ್ಮಥನೆ...

ಸಾಕಿನ್ನು ಕಾಡುವ ಚಿಂತನೆ...

ಕಣ್ಮುಂದೆ... ಬಾ ಒಮ್ಮೆ...

ನಿನ್ನಲ್ಲೆ ಕಳೆದೋಗುವ ಮುನ್ನವೆ...

 

 

ಬರೆಯಲು ಹೊಸ ಸಂಚಯ

ಶುರುವಿಟ್ಟಿದೆ ತೊದಲ ಪರಿಚಯ

ಹೆಣೆಯಲು ನಿನ್ನ ಅಭಿನಯ

ಕಳೆಕಟ್ಟಿದೆ ಮೊದಲ ವಿನಿಮಯ

ನಿಂತಲ್ಲೆ ನನಗೀಗ

ನಿನ್ನದೇ ಸವಿಧ್ಯಾನ

ಸಂಜೆಯು ಸುಡುತಿದೆ

ತೇಲಿ ನಿನ್ನಯ ಮೌನ

ಭಾರವಾಯಿತೇಕೋ ಕಾಣೆ ನಾನು ರಾತ್ರಿ ಇರುಳು

ಪ್ರತಿ ಕನಸಲೂ ಇಣುಕಿದೆ ನಿನ್ನ ನೆರಳು

ಹೃದಯ ಬಾಗಿಲ

ತೆರೆವ ಮುನ್ನವೆ

ನೆನಪಾಗು ನೀ...

 

ಸವಿಯಲು ನಿನ್ನ ಪ್ರೀತಿಯ

ಮುಡುಪಿಟ್ಟಿಹೆ ನನ್ನ ನಾಳೆಯ

ತೆರೆಯಲು ಮನದ ಹಾಳೆಯ

ಕಂಡೆ ನೀ ಬರೆದ ಓಲೆಯ

ಪದವಿರದ ಸ್ವರವಿರದ

ಮೌನ ಸಂಗೀತ ನೀನು

ನನ್ನೊಳಗೆ ಮಿಡಿಯುತಿರೊ

ಹೃದಯ ಸರಿಗಮದ ವೇಣು

ಚಂದಿರನ ಕಾಂತಿಯಲ್ಲಿರೊ ಮಿಂಚು ನೀನು

ಆ ಪ್ರೀತಿ ಬೆಳದಿಂಗಳ ಸುರಿಸು ಇನ್ನು

ನಿನ್ನ ಸವಿನಯ

ಕಣ್ಣ ಅಂಚಲಿ

ಮರೆಯಾಗುವೆ...

 

 


3.

Posted by [email protected] on October 21, 2012 at 9:35 AM Comments comments (0)

ನಾ ನಿನ್ನಾ ಕಂಡಾ ಕ್ಷಣ

ಬಾ ಎಂದಿದೆ ಹೊಸ ಜೀವನ

ನಿನ್ನ ಪಿಸುಮಾತಿನ

ಮೋಡಿಗೆ ಸಿಲುಕಿದೆ ಭಾವನ

ನನ್ನ ಬಾಳ ಚೇತನಾ

ನಿನ್ನ ಪ್ರೀತಿಗೆ ಸೋತೆನಾ

 

ಮನಸಿನ ನೂರು ಕಲ್ಪನೆ

ಜಿನುಗಿ ಕುಣಿಯುತಿದೆ ಮೆಲ್ಲನೆ

ನಿನ್ನ ರೂಪದ ವರ್ಣನೆ

ಈ ಹಾಡ ಆಲಾಪನೆ

ಪ್ರೀತಿ ಎಂದರೆ ಹೀಗೆನೆ

ಹೃದಯ ಗುನುಗಿದೆ ಸುಮ್ಮನೆ

 

ಮಾಸದ ಮಧುರ ಯಾತನೆ

ಪ್ರೀತಿ ಒಡಲಿನ ಸೂಚನೆ

ನಿನ್ನ ಕಣ್ಣಿನ ಸೆರೆಮನೆ

ನನ್ನ ಪಾಲಿಗೆ ಅರಮನೆ

ನಿನ್ನ ಮಾಯ ಸಲ್ಲಾಪನೆ

ಕೇಳಿ ನನ್ನೆ ನಾ ಮರೆತೆನೆ

2.

Posted by [email protected] on October 21, 2012 at 9:10 AM Comments comments (0)

ಮುತ್ತು ಮುತ್ತು ಮಳೆಹನಿಯಲಿ

ಮನದಿನಿಯನ ಜೊತೆಯಲಿ

ಮೆಲ್ಲಮೆಲ್ಲನೆ ನಡೆಯಲಿ

ಇನಿ, ದನಿ ಸವಿಮಾತಲಿ..

ತೇಲಿದೆ, ಹಾರಾಡಿದೆ

ಸುಹಾಸಿನಿ ಮನಸೇ

ನನ್ನಾಸೆಯ ಗರಿಗೆದರಿದೆ

ಸುಭಾಷಿಣಿ ಕನಸೇ

ಮೊದಮೊದಲ..

ಪರಿಣಯಕೆ..

ನಿನ್ನಾ ನಗು ಹೂ ಚೆಲ್ಲಿದೆ,

ಕಣ್ಣಂಚಲಿ ನೀ ಮಿಂಚಿದೆ,

ನನ್ನ ನಾಳೆ ಕಸಿದೆ...

 

 

ಬೇಸಿಗೆಯ ಉರಿಬಿಸಿಲಲಿ

ತಂಪೆರೆದಿಹ ಮಳೆಯಲಿ

ನೀನಿರೆ, ಜೊತೆಸಾಗಿರೆ

ಪರಿಭಾಷೆಗೆ ಮುದನೀಡಿರೆ

ಭಾವಲೋಕಕೆ, ರೆಕ್ಕೆ ಬಂದಂತಿದೆ...

ಬೆಳ್ಳಿಯ ಮೋಡ,

ಬರಲೇ ಬೇಡ,

ದಯಮಾಡಿ ಕೊಂಚ ಕೂಡ,

ತಿರುಗೊ ಸಮಯ,

ಸರಿಸಿ ತೆರೆಯ,

ನೀ ಇಲ್ಲೆ ನಿಲ್ಲೆಯಾ?

ಮಳೆಬಿಲ್ಲ...

ಕೊಡೆ ಹಿಡಿದು...

ನನ್ನಾ ತೋಳಲ್ಲಿ ಬಳಸಿರುವ,

ನೆನ್ನೆ ನೆನಪನ್ನು ಕೆದಕಿರುವ,

ನನ್ನಾ ಹಾಳೆ ಇವ...

 

 

 

 

 

 

 

 

 

 

 

 

 

 

 

 

 

 

 

 

 

 

1.

Posted by [email protected] on October 21, 2012 at 9:05 AM Comments comments (0)

ನಾ ಹುಡುಕಿಹೆ

ನಿನ್ನದೆ ಆ ರೂಪವ

ನಾ ಹುಡುಕಿಹೆ

ನಿನ್ನದೆ ಆ ರೂಪವ

ಕನಸಿನಲಿ ಕಾಡುವ

ಮಂದಹಾಸವ..

ಓ ಮಾಯೆ ಎಲ್ಲಿಹೆ?

ನಿನ್ನ ಛಾಯೆ ಕಾಡಿಹೆ

ನಿನ್ನ ಛಾಯೆ ಕಾಡಿಹೆ

ಓ ಮಾಯೆ ಎಲ್ಲಿಹೆ?

 

ನಿನ್ನ ನೆನಪು ಮರಳಿದೆ

ಹೊಸ ಹುರುಪು ತಂದಿದೆ

ಏಕಾಂಗಿ ಪಯಣಕೆ

ನಿನ್ನ ಜೊತೆಯು ಬೇಕಿದೆ

ಏನೋ ತಲ್ಲಣ, ನಿನ್ನ ನಾ

ನೆನೆಯದಾ ದಿನ

ಒಮ್ಮೆ ಬಂದು ನೀ, ಕಾಡೆಯಾ

ಕನಸಿನಾ ಕ್ಷಣ

ಓ ಮನಸೆ ಎಲ್ಲಿಹೆ?

ನಿನ್ನ ಕನಸ ಕಾದಿಹೆ

ನಿನ್ನ ಕನಸ ಕಾದಿಹೆ

ಓ ಮನಸೆ ಎಲ್ಲಿಹೆ?

 

ನನ್ನ ಖಾಲಿ ದಾರಿಯು

ನಿನ್ನ ಎದುರು ನೋಡಿದೆ

ನೀ ಬರುವ ವೇಳೆಗೆ

ಸಂಜೆ ತಂಪೆರೆದಿದೆ

ನಾ ಬೀಸಲೆ? ಕೇಳಿದೆ

ತಂಗಾಳಿಯು

ನಿನ್ನ ನಗುವಿಗೆ ಕಾದಿದೆ

ಹೂ ಅರಳಲು

ಓ ನಗುವೆ ಎಲ್ಲಿಹೆ?

ನಿನ್ನ ಸ್ವರವೆ ಕಾಡಿಹೆ

ನಿನ್ನ ಸ್ವರವೆ ಕಾಡಿಹೆ

ಓ ನಗುವೆ ಎಲ್ಲಿಹೆ?