Radha Iyer

Click here to edit subtitle

Blog

15

Posted by [email protected] on March 29, 2014 at 6:30 AM Comments comments (45)

 

ಅಮ್ಮ

 

 ಅಮ್ಮ

ನಿನ್ನಂತರಂಗ

ತೀರಸಾಗರ...

ಅಲೆಯಾಗಿ

ಅಪ್ಪುವೆ ನಾ

ನಿನ್ನ ಮಡಿಲ...

 

ಭಾವನೆಯ

ಆಗಸದಲ್ಲಿ

ನೀ ಧ್ರುವತಾರೆ ಕಣೆ..

ನಿನ್ನೊಲುಮೆ

ಪ್ರೀತಿ ಆಟದಲಿ

ನಾ ಸೋತರೆ, ನೀನೆ ಹೊಣೆ...

ತಂಪೆರೆವ

ಆ ಮುಗುಳ್ನಗೆಯ

ಪಸರಿಸು ಈ ಧರೆಗೆ...

ಉರಿಬಿಸಿಲ

ಅವಳ ಬೇಗೆಯನು

ಮರೆಸು ನೀ ಒಮ್ಮೆಗೆ...


ನಿನ್ನ ಜೋಲಿ

ಲಾಲಿಯಲ್ಲಿ

ಕನಸೊಂದು ಮೂಡಿದೆ...

ಹದಿನಾಲ್ಕು

ಲೋಕದಲಿ
ನಿನ್ನ ಹೆಸರೆ ಕೇಳಿದೆ...

ಪಿಸುಗುಡಲೇ

ಗುಟ್ಟಿನ ಮಾತು

ನಿನ್ನೆದೆಗೂಡಿನಲಿ...

ಪ್ರತಿಜನ್ಮ

ನಿನ್ನ ಕುಡಿ ನಾನೆ

ಬರೆದುಕೊ ನೀ ಮನಸಿನಲಿ...

 

14.

Posted by [email protected] on November 13, 2012 at 11:40 PM Comments comments (0)

ದೀಪಾವಳಿಯಲಿ ನನ್ನೊಂದು ಮನವಿ..

ಬೆಳಗು ಎನ್ನೊಳಗೆ

ಆರದ ಆತ್ಮ ಜ್ಯೋತಿಯನು

ಪ್ರಜ್ವಲಿಸಿ, ಉಜ್ವಲಿಸುವ

ಜ್ಞಾನ ಪ್ರಣತಿಯನು

ಇಂದು. ಮುಂದು.. ಎಂದೆಂದೂ!!

 

ಭೇಧಿಸಬೇಕಿದೆ ನೀ ನನ್ನೊಳಗಿನ

ಅಂಧಕಾರವನು

ಕಾಣದೆ ಅಡಗಿರುವ

ಅಹಂಕಾರವನು

ಇಂದು. ಮುಂದು.. ಎಂದೆಂದೂ!!

 

ಬರಿಯ ದೀಪವಲ್ಲ

ನೀ ನನ್ನ ಪಾಲಿಗೆ

ಮನಸ ಪ್ರತಿಫಲಿಸುವ

ಕನ್ನಡಿಯು ಈ ಬಾಳಿಗೆ

ಇಂದು. ಮುಂದು.. ಎಂದೆಂದೂ!!

 

 

 

 

13.

Posted by [email protected] on November 13, 2012 at 11:40 PM Comments comments (0)

ಭಾವ ನಿವೇದನೆ!

ಹೇಳಬೇಕೆನಿಸಿದೆ

ನೂರಾರು ಮಾತು,

ಮಾತು ನೀಡಿ

ಕೈಹಿಡಿದವಳ ಕುರಿತು..

 

ಉಸಿರ ಏರಿಳಿತಕೆ

ಭಾವವೀಣೆ ಅವಳು,

ಕಂಡ ಕನಸಿಗೆ

ಬಣ್ಣ ತುಂಬಿದವಳು..

 

ಕಂಟದಿ ಕುಣಿವ

ನಾಟ್ಯ ಶಾಂತಲೆ ಅವಳು,

ರೋಮದಿ ಬರೆವ

ಕಲಾ ಸರಸ್ವತಿ ಅವಳು..

 

ಸೋತಾಗ ಬೆನ್ತಟ್ಟಿ

ಹುರಿದುಂಬಿಸಿದಳವಳು,

ಗೆಲುವಿನಲಿ ನನ್ನೊಡನೆ

ಸಂಭ್ರಮಿಸಿದಳವಳು..

 

ಮನಸಿನ ಭಾವನೆಗೆ

ಸೇತುವೆಯು ಅವಳು,

ಅಭಿಮಾನದ ಹಕ್ಕಿಗೆ

ರೆಕ್ಕೆ ನೀಡಿದವಳು

 

ಅವಳಿಲ್ಲದೆ ನಾನಿಲ್ಲ

ಈ ಅಸ್ತಿತ್ವಕೆ ಬೆಲೆಯಿಲ್ಲ,

ಓ! ‘ಕನ್ನಡ ಮಾತೆ’ಯೆ ಕೇಳೆ

ನಿನಗರ್ಪಿಸಿಹೆ ನನ್ನೆಲ್ಲ ನಾಳೆ...

 

 


 

 

 

 

12.

Posted by [email protected] on October 21, 2012 at 10:05 AM Comments comments (0)

ಭಾವನೆ ಒಡಲಾಳ


 

ಮಧುರ ನಾದವದು

ವಾದ್ಯದೊಡಲಲ್ಲಿದೆಯೇ

ಇಲ್ಲವೆ, ಮೀಟುವ

ತಂತಿಯಲ್ಲಿದೆಯೇ?

ತಂತಿ-ವಾದ್ಯದ ಸಮ್ಮಿಲನವೇ

ನಾದಕ್ಕೆ

ಬುನಾದಿಯಲ್ಲವೇ?

 

ಭಾವನೆಯೆಂಬುದು

ಮನಸ ಗರ್ಭದೊಳಗೆ

ಅಡಗಿರುವ ಕೂಸೆ?

ಇಲ್ಲವೆ, ಮಾತಿನೊಡನೆ

ಅಭಿವ್ಯಕ್ತಗೊಳ್ಳುವ

ಆತ್ಮ ನಿವೇದನೆಯೇ?

ಮನಸ ಸತತ ಮಂಥನದ ಫಲವೇ

ಭಾವನೆ ಜನನವಲ್ಲವೇ?

 

ಭಾವನೆಯ ಮಿಡಿತಕ್ಕೆ

ಬೇಲಿಯ ತಡೆ ಏಕೆ?

ಭಾವಾಂತರಂಗವದು

ಹರಿವ ‘ಜೀವನದಿಯಂತೆ’

ಅದರ ಪಾತ್ರವಿಹುದು

ಅವರವರ ಭಾವ-ಭಕುತಿಗೆ ತಕ್ಕಂತೆ

11.

Posted by [email protected] on October 21, 2012 at 9:55 AM Comments comments (0)ಅಗುಳು ಅನ್ನವೂ ಕೂಡ

ಮುನಿಸಿ ಮರೆಯಾಗಿಹುದು

ಒಗರು ಬಾಯಿಯು ದಾಹದಿ

ಸೊರಗಿ ಸೆಟೆಗೊಂಡಿಹುದು

ಕಿತ್ತು ತಿನ್ನುವ ಹಸಿವು

ಮತ್ತೆ ಬೆನ್ಹತ್ತಿಹುದು

ಈ ಅಳಿದುಳಿದ ದೇಹಕೆ

ಹದ್ದು ಕಾದಿಹುದು

ನಿನ್ನ ತೃಪ್ತ ದೇಹಕೆ

ಹಸಿವು ಕಂಡಿತಾದರೂ ಹೇಗೆ?

ಕಂಡಿದ್ದರೆ, ಈ ದೃಶ್ಯ

ಮರುಕಳಿಸಿ ಕಣ್ಮುಂದೆ ಬರಲು ಸಾಧ್ಯವೇ??


10.

Posted by [email protected] on October 21, 2012 at 9:50 AM Comments comments (0)

ರಂಗನತಿಟ್ಟಿನಲಿ...ಬಾನಾಡಿಯ ಜೊತೆಯಲ್ಲಿ...


 

ಸಂಜೆ ಮುಗಿಲ ಬನದಲ್ಲಿ

ಬಾನಾಡಿಯ ಜೊತೆಯಲ್ಲಿ

ತೇಲಿದೆ ಮನವು ಹರುಷದಲಿ,

ಇದ, ಹೇಗೆ ನಾ ಬಣ್ಣಿಸಲಿ?

ಎರಡೇ ಎರಡು ಮಾತಿನಲಿ...

 

ತೀರವ ಬಿಟ್ಟ ಹಾಯಿದೋಣಿ,

ನದಿ ಅಂ‘ತರಂಗ’ದ ಭಾವ ಬಸಿದಿರೆ,

ನೋಡುವ ಕಣ್ಣಿಗೆ ಏನೋ ಪುಳಕ,

ಆ ಭಾವವೊಮ್ಮೆ ಸವಿಯುವ ತವಕ,

ಅದು, ಮಾತಿಗೆ ನಿಲುಕದ ರಮ್ಯನಾಕ!

 

ಹಾರುವ ಹಕ್ಕಿಯ ದನಿಯಲ್ಲಿ,

ಕೇಳಿದೆ ಅವಳ ಜೋಲಿಯ ಲಾಲಿ,

ತನ್ನಯ ಮರಿಯ ಮಮತೆಯಲಿ,

ಮುದ್ದಾಡಿದಳು ಬೆಚ್ಚನೆ ಅಪ್ಪುಗೆಯಲಿ,

ಇದ, ಹೇಗೆ ನಾ ಮರೆಯಲಿ?

 

9.

Posted by [email protected] on October 21, 2012 at 9:45 AM Comments comments (0)

ನೀ ಮುನಿದಿರೆ..

 

ಮುನಿದಿಹಳು ಉಪ್ಪನೆ

ಮೊಗವ ಹೊತ್ತುಕೊಂಡು

ಉಪ್ಪು ಮೆಣಸಿನಕಾಯಿ ಬೇಕೆ

ಎಂದು ಸಪ್ಪನೆ ಕೇಳಿಹಳು,

ಹೆಜ್ಜೆ ಮುಂದಿಟ್ಟಳು

ಸ್ವಲ್ಪ ತಡೆಹಿಡಿದಳು

ಹಿಂತಿರುಗಿ ಮತ್ತೆ ಕೇಳಿದಳು

ಸಿಡಸಿಡನೆ ಹರಳಂತೆ

ಏಕೆ ಸಿಡಿಯುವೆ ಎಂದು

ನನ್ನೊಡನೆ ಮಾತು

ಮರೆಯಾಯಿತೇಕಿಂದು?

ಮುಖಭಾವದಿ ಇತ್ತು

ನೂರೊಂದು ಪ್ರಶ್ನೆಗಳು,

ಎದುರು ನೋಡುತ್ತಾ

ನನ್ನ ಮೌನಕೆ ಉತ್ತರಗಳು!

ಕ್ಷಣಕಾಲ ಯೋಚಿಸಿದೆ

ಈ ಕವಿತೆಯ ಬರೆದೆ

ಅವಳೆಡೆಗೆ ಹೋಗಿ

ಪುಸ್ತಕವ ಮುಂದಿಟ್ಟೆ

ಓದಿದಳು, ಫಳ್ಳನೆ ನಕ್ಕಳು

ಅಪ್ಪನಾ ಕರೆದು

ಎಲ್ಲವನು ಉಸುರಿದಳು

8.

Posted by [email protected] on October 21, 2012 at 9:15 AM Comments comments (0)

ರಾಧೆ!ರಾಧೆ, ರಾಧೆ ಎಂದು

ಮಾಧವ ಕರೆದಿರೆ,

ನೀ ಏಕೆ ಮೂಕಾದೆ,

ರಾಧೆ,

ಮೌನಕೆ  ಏಕೆ ಶರಣಾದೆ?

 

ಅ ಕೊಳಲ ನಾದ,

ಪ್ರೇಮ ನಿನಾದ

ನಿನ್ನ ಹೆಸರೇ ಜಪಿಸಿದೆ

ರಾಧೆ, ನಿನ್ನ ಹೆಸರೇ ಜಪಸಿದೆ

ಗುಡುಗಿದೆ ಹೊರಗೆ,

ಭಯವಾಗದೆ ನಿನಗೆ?

ಮಾಧವನ ಜೊತೆಯಿಲ್ಲದೆ?

ರಾಧೆ, ಮಾಧವನ ಜೊತೆಯಿಲ್ಲದೆ?

 

ರಾಧೆಯ ಮನವ

ಅರಿಯನೇ ಮಾಧವ,

ಮಾತಿನ ಮಳೆಯಿಲ್ಲದೆ?

ರಾಧೆ, ಮಾತಿನ ಮಳೆಯಿಲ್ಲದೆ?

ನಡುಗಿದೆ ಭಾವ,

ಇರಲಾರದೆ ಜೀವ

ಮಾಧವನ ನೆನಪಿಲ್ಲದೆ?

ರಾಧೆ, ಮಾಧವನ ನೆನಪಿಲ್ಲದೆ?

7.

Posted by [email protected] on October 21, 2012 at 9:05 AM Comments comments (0)

`ದೃಶ್ಯ ಯಾನ'

ಕಾಣದೆ ಮನಗ೦ಡ ಹಾದಿಯಲಿ

ನಿತ್ಯ ಚೇತನ ಪಯಣ,

ನೂರು ಮಾತುಗಳನ್ನು ಹಿಡಿದಿಟ್ಟಿದೆ

ಎದೆಯಾಳದ ಮೌನ,

ಮಧುರ ನಿನಾದವ ಆಲಿಸಲು

ಹ೦ಬಲಿಸಿದೆ ಕೆಲ ಮನ,

ಕಾಣದ ದಿಕ್ಕಿನೆಡೆಗೆ ದಿಟ್ಟಿಸಿದೆ

ಎಳೆ ಕ೦ಗಳು ಅನುಕ್ಷಣ,

ಎನಿತು ಭಾವ ಕಣ್ಹನಿಯಾಗಿ ಚಿಮ್ಮಿದೆ,

ನೆನೆದಾಗ ಈ ದೃಶ್ಯಯಾನ....

6.

Posted by [email protected] on October 21, 2012 at 9:00 AM Comments comments (0)

ಕಂಡು-ಕೇಳಿದ ಜೀವನಗಾಥೆ ಕವನ ರೂಪ ಪಡೆದಾಗ...

 


ಇಳಿ ಸಂಜೆ ಮಬ್ಬಿನಲಿ,

ತೀಡಿದ ತಂಗಾಳಿಯಲಿ,

ಮರಳಿ ಕೇಳಿದೆ ಹಳೆಯ ಹಾಡು,

ನುಸುಳಿ ಭಾವದೊಡಲ ಗೂಡು!

 

ಎಲ್ಲೊ ದೂರದಿ ಹಕ್ಕಿ,

ತನ್ನ ದುಃಖವ ಬಿಕ್ಕಿ,

ಹಾಡಿದ ರಾಗವು ಏಕೋ ಕಾಡಿದೆ,

ಕಾರಣವೇನೋ ನನಗೂ ತಿಳಿಯದೆ,

ಆ ರಾಗವೂ...

ಈ ಭಾವವೂ...

ಕಲೆತು ಹೇಗೋ ನೆನಪ ಒಳಹರಿವು...

 

ಬಿಸಿಲು ಕುದುರೆಯನೇರಿ,

ಹೊಕ್ಕೆ ಮಾಯಾನಗರಿ,

ಕವಲು ಸೇರಿತು ಯಾವುದೋ ದಾರಿ?

ತಿಳಿಯದೆ ನೊಂದಿಹೆ ಮನವು ಹೆದರಿ,

ಆ ದಾರಿಯೂ...

ಈ ಪಯಣವೂ...

ಹೇಗರಿಯಲಿ ಇದರ ಆಂತರ್ಯವು?