Radha Iyer

Click here to edit subtitle

Blog

3.

Posted by [email protected] on October 18, 2012 at 6:30 AM Comments comments (0)ಮಲಾಲಾ: ‘ಪಾತಕಿ’ಗಳ ನಾಡಿನಲ್ಲಿ ಒಬ್ಬ ಶಾಂತಿದೂತೆ!

 

‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು’, ಹಾಡು ಟಿವಿನಲ್ಲಿ ಬರ್ತಿದ್ರೆ, ಕಣ್ಮುಂದೆ ಆರತಿಯವರ ದೇಹ ಮಾತ್ರವಿತ್ತು, ಆದ್ರೆ "ಮಲಾಲಾ Yousufzai" ಎಂಬ ಪಾಕಿಸ್ತಾನದ ಹದಿನಾಲ್ಕರ ಪೋರಿ ವ್ಯಕ್ತಿತ್ವ, ಆ ಹಾಡಿಗೆ ಜೀವಾಳ ಅನ್ನುವಂತೆ ಮನಸಿನ ತುಂಬಾ ಆವರಿಸಿಬಿಟ್ಟಿತ್ತು. 2-3 ದಿನದಿಂದ ಮಲಾಲಾ ಯಾರು? ಅವಳ ಹಿನ್ನೆಲೆ ಏನು? ಅಂತ ಮನಸ್ಸು ಕಂಪ್ಯೂಟರ್ ನಲ್ಲಿ ಹಲವು ವಿಚಾರಗಳನ್ನ ಕೆದಕುತ್ತಿದ್ದಾಗ,ಅವಳ ಧೈರ್ಯ, ಸ್ಥೈರ್ಯ, ಹೋರಾಟ, ಛಲ, ದೇಶಪ್ರೇಮ ಎಲ್ಲವೂ ನನ್ನನ್ನ ಮೂಕವಿಸ್ಮಿತವಾಗಿಸಿತ್ತು.ನನಗೇ ಗೊತ್ತಿಲ್ಲದ ಹಾಗೆ ಅದೇನೋ ಪ್ರೀತಿ, ಕನಿಕರ ಅವಳೆಡೆಗೆ ಉಕ್ಕಿ ಹರಿಯಿತು.

 

Just Imagine, ಹದಿನಾಲ್ಕನೇ ವಯಸ್ಸಿನಲ್ಲಿ ಒಬ್ಬ ಪೋರಿ ತನ್ನ ದೇಶದ ಅಡಿಪಾಯವನ್ನ ಭದ್ರಪಡಿಸುವ ಕನಸು ಕಟ್ಟುತ್ತಾಳಂದ್ರೆ, ಆ ಕನಸಿನ ಆಳ ಮತ್ತೆಷ್ಟಿರಬಹುದು? ‘ಪಾತಕಿ’ಗಳ ನಾಡಿನಲ್ಲಿ ನಾಳೆಯ ದಿನ ಕಣ್ತೆರಿತೀವಾ ಅಂತ ಯೋಚಿಸೋ ಜನರ ನಡುವೆ, ಇಸ್ಲಾಂ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕಿಗಾಗಿ,ತನ್ನ ಬ್ಲಾಗ್ ಮೂಲಕ ತಾಲಿಬಾನ್ ವಿರುದ್ದವೇ ದನಿಯೆತ್ತಿದ ಇವಳ ಧೈರ್ಯಕ್ಕೆ ಏನು ಹೇಳಬೇಕು? ಅವಳಿಗೂ ಗೊತ್ತಿತ್ತು, ಮುಂದೊಂದು ದಿನ ತನ್ನ ಈ ದಿಟ್ಟ ಹೆಜ್ಜೆ, ತನ್ನ ಪ್ರಾಣಕ್ಕೆ ಕುತ್ತಾಗಬಹುದು ಅಂತ, ‘ಭಯ’ದ ಭೂತ ಅವಳನ್ನೂ ಆವರಿಸಿತ್ತು, ಆದ್ರೆ ಹೆಣ್ಣಿನ ಅಂತರಂಗ ಧ್ವನಿ ಸಾವಿಗೂ ನಡುಕಹುಟ್ಟಿಸಿಬಿಡುತ್ತೆ. ಮುಂದಿನ ದೇಶದ ಉಜ್ವಲ ಭವಿಷ್ಯಕ್ಕೆ ಒಬ್ಬ ಹೆಣ್ಣಿನ ಪ್ರಾಣ ಪಣವಾಗಿಡಬೇಕಾದ್ರೆ ಅದಕ್ಕೆ ತಾನು ‘ಸೈ’ ಎಂದು, ತನ್ನ ಪ್ರತಿಭಟನೆ ಮುಂದುವರೆಸಿದ ಮಲಾಲಾ ವ್ಯಕ್ತಿತ್ವ ಪ್ರತಿ ಹೆಣ್ಣಿನ ಅಂತರಂಗ ಕನ್ನಡಿ! ಹೌದು, ಪ್ರತಿ ಹೆಣ್ಣು ತನ್ನ ಜೀವನದ ಕಾಲಘಟ್ಟದಲ್ಲಿ ಇಂತಹುದೇ ಹಲವು ಸಾಂಸಾರಿಕ ಜಂಜಾಟದಲ್ಲಿ ತೇಲಿ, ಮುಳುಗಿ ಬದುಕಿನ ನೌಕೆಯನ್ನ ದಡ ಸೇರಿಸ್ತಾಳೆ. ಮಲಾಲಾ ಇಡೀ ದೇಶವನ್ನ ತನ್ನ ಪುಟ್ಟ ಸಂಸಾರವಾಗಿ ಮಾಡಿಕೊಂಡ್ರೆ, ಮಿಕ್ಕ ಹೆಣ್ಣು ಮಕ್ಕಳು ಆ ದೇಶವನ್ನು ರೂಪಿಸುವ ಪುಟ್ಟ ಪುಟ್ಟ ಸಂಸಾರವನ್ನ ಕಾಪಾಡುವ ಆಶಾವಾದಿಗಳಾಗಿರ್ತಾರೆ!

ಇವತ್ತು, ತಾಲಿಬಾನ್ ಅಟ್ಟಹಾಸಕ್ಕೆ ಸಾವು - ಬದುಕಿನ ನಡುವೆ ಹೋರಾಡ್ತಿರೋ ಮಲಾಲಾಗೆ ಒಂದು ಬಹು ದೊಡ್ಡ ಕನಸಿದೆ. ತಾನೆ ಸಾಕಿ ಬೆಳಸಿದ ‘ಭಯೋತ್ಪಾದನೆ’ಯ ಕ್ರಿಮಿಯಿಂದ ನರಳುತ್ತಿರೋ ಪಾಕಿಸ್ತಾನವನ್ನ ತಾನು ಭಾರತದಂತೆ ಶಾಂತಿಯ ನೆಲೆವೀಡಾಗಿ ಮಾಡ್ಬೇಕು ಅಂತ. ಇದನ್ನ ಕೇಳಿದ ತಕ್ಷಣ ಮನಸಿಗೆ ಬಂದ ಮಾತು, "ಮಲಾಲಾಳನ್ನ ಪಡೆದ ಪಾಕಿಸ್ತಾನ ನೀನೇ ಧನ್ಯ!" ಇದು ಭಾರತೀಯಳಾಗಿ ಅಲ್ಲ, ಒಬ್ಬ ಹೆಣ್ಣಾಗಿ ನಾ ನಿನಗೆ ಹೇಳುವ ಕೊನೆ ಮಾತು.

 

2.

Posted by [email protected] on October 18, 2012 at 6:30 AM Comments comments (0)

ನಗರೀಕರಣ ವರವೋ? ಶಾಪವೋ?

 

ಇಂದಿನ ಯಾಂತ್ರಿಕ ಬದುಕಿಗೆ ತಕ್ಕಂತೆ ತಾಳ ಹಾಕುತ್ತಾ, ನಗರಜೀವನಕ್ಕೆ ಅಂಟಿಕೊಂಡು ಕಾಲವನ್ನು ದೂಡುತ್ತಾ, ಬದುಕಿನ ರಸಕ್ಷಣಗಳನ್ನು ಅರೆಗಳಿಗೆ ಸವಿಯಲಾರದೆ ಪರದಾಡುತ್ತಿರುವ ಒಬ್ಬ ಗ್ರಾಮೀಣವಾಸಿಗೆ ತಾ ಕಂಡಿದ್ದ ಗ್ರಾಮದ ಪರಿಕಲ್ಪನೆ ಬಗ್ಗೆ ಸವಿಸ್ತಾರವಾಗಿ ಕೇಳಿದರೆ, ಬಹುಶಃ ಆತ ತನ್ನ ಗತಿಸಿದ ೩೦ - ೩೫ ವರ್ಷಗಳ ಹಿಂದಿನ ದಿನಕ್ಕೆ ಹೋಗಬೇಕಾಗುತ್ತದೆ. ಏಕೆಂದರೆ,ಇಂದು ಅತಿಯಾದ ನಗರೀಕರಣದ ಪ್ರಭಾವದಿಂದಾಗಿ ಹಳ್ಳಿಯ ಆ ಸೊಗಡು ಮಾಸಿ ಹೋಗ್ತಿದೆ.

 

ಜನರಲ್ಲಿ ಹಿಂದೆ ಇದ್ದಂತಹ ಆ ಮುಗ್ಧತೆ, ತಮ್ಮದೇ ಆದ ಸಂಪ್ರದಾಯಗಳನ್ನು, ಸಂಸ್ಕೃತಿಯನ್ನು ಆಚರಿಸುತ್ತಿದ್ದಂತಹ ರೀತಿ, ವ್ಯವಸಾಯವನ್ನು ತಮ್ಮ ಜೀವಾಳವನ್ನಾಗಿಸಿಕೊಂಡಿದ್ದ ಆ ಬಗೆ, ಎಲ್ಲದಕ್ಕಿಂತ ಹೆಚ್ಚಾಗಿ ಕೃತಕತೆಯಿಂದ ದೂರವಾಗಿ ಜೀವನವನ್ನು ನಡೆಸುತ್ತಿದ್ದದ್ದು, ಹಳ್ಳಿಯ ಆ ವಾತಾವರಣಕ್ಕೆ ಮೆರುಗನ್ನು ನೀಡಿದ್ದವು.

 

ಕಾಲಕ್ರಮೇಣ ಈ ನಗರೀಕರಣ ಅನ್ನೊ ಮಹಾಮಾರಿ ಹಳ್ಳಿಗಳನ್ನ ಆವರಿಸುತ್ತಾ ಬಂತು. ಜಾಗತೀಕರಣ, ನಗರೀಕರಣದ ಹೆಸರಿನಲ್ಲಿ ಹೊಸ ಹೊಸ ಆವಿಷ್ಕಾರಗಳು, ಎರವಲು ಪಡೆದಂತ ಸಂಸ್ಕೃತಿ ಹಳ್ಳಿಗಳಿಗೆ ಆಕ್ರಮಣ ಮಾಡಿದವು. ಇದರ ಜೊತೆಗೆ, ‘ವಿದೇಶಿ ವ್ಯಾಮೋಹ’ ಅನ್ನೊ ಪೆಡಂಭೂತ ಸಹ ಹಳ್ಳಿಗಳೆಡೆಗೆ ದಾಪುಗಾಲನ್ನು ಇಟ್ಟಿತು. ಇದರಿಂದಾಗಿ ಇಂದು ಹಾಕಿಕೊಳ್ಳೊ ಬಟ್ಟೆಯಿಂದ ಹಿಡಿದು, ಬಹಳಷ್ಟು ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರೊದನ್ನ ನಾವು ಕಾಣಬಹುದಾಗಿದೆ.

 

ಇನ್ನು ಐ.ಟಿ ಬಿ.ಟಿ ಕಂಪನಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಕೇವಲ ನಗರಕ್ಕೆ ಮಾತ್ರ ಸೀಮಿತಗೊಳಿಸದೆ, ಹಳ್ಳಿಗಳಿಗೂ ವಿಸ್ತರಿಸುತ್ತಾ ಇದೆ. ಇದಕ್ಕಾಗಿ ಹೆಚ್ಚು ಹೆಚ್ಚು ಬೆಲೆಗಳಿಗೆ ಜಮೀನುಗಳನ್ನು ಕೊಂಡುಕೊಳ್ಳೊಕೆ ಮುಂದೆ ಬರ್ತಿದೆ. ಪಾಪ! ರೈತನಾದವನು ತನ್ನ ಅಸಹಾಯಕತೆಯಿಂದಲೊ ಅಥವಾ ಅವರು ಒಡ್ಡುತ್ತಿರುವ ಆಸೆ ಆಮಿಷಗಳಿಗೆ ಬಲಿಯಾಗೊ, ತನ್ನ ವ್ಯವಸಾಯ ಭೂಮಿನ ಮಾರುತ್ತಿದ್ದಾನೆ. ಆದರೆ, ಇದರಲ್ಲಿ ಕೇವಲ ರೈತನ ಪಾತ್ರ ಮಾತ್ರ ಇಲ್ಲ ಜೊತೆಗೆ ಇಂದಿನ ಯುವಜನತೆ ಪಾತ್ರನೂ ಇದೆ.ಮೊದಲನೆದಾಗಿ, ಯುವಪೀಳಿಗೆ ವ್ಯವಸಾಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ತಾ ಇದ್ದಾರೆ.ಅದಕ್ಕಿಂತ ಹೆಚ್ಚಾಗಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಸಾವಿರಾರುಗಟ್ಟಲೆ ಸಂಪಾದನೆ ಮಾಡುವಂತಹ ಉದ್ಯೋಗಾವಕಾಶವನ್ನು ಇಂದಿನ ನಗರ ಕಂಪನಿಗಳು ಅವರಿಗೆ ನೀಡ್ತಿವೆ. ಹೀಗಿರುವಾಗ ವರ್ಷಪೂರ್ತಿ ಮೈಬಗ್ಗಿಸಿ, ಬೆವರು ಹರಿಸುವಂತಹ ಕರ್ಮ ನಮಗೇಕೆ? ಎನ್ನುವುದು ಅವರ ವಾದ.

 

ಇದೆಲ್ಲ ಕೇಳಿದಾಗ, ಏನಿದು ನಗರೀಕರಣದಿಂದ ಬರೀ ಕೆಡಕುಗಳೇ ಆಗಿವೆಯಾ ಎಂದು ನಮಗೆ ಅನ್ನಿಸದೆ ಇರದು. ಖಂಡಿತ ಇಲ್ಲ! ಇದರಿಂದ ಕೆಲವು ಉಪಯೋಗಗಳು ಸಹ ಆಗಿವೆ. ಎಷ್ಟೋ ವರ್ಷಗಳ ವರೆಗೆ ಎಷ್ಟೋ ಹಳ್ಳಿಗಳು ಸಾರಿಗೆ ವ್ಯವಸ್ಥೆಯನ್ನೆ ಕಂಡಿರಲಿಲ್ಲ. ಆದರೆ, ನಗರೀಕರಣದಿಂದ ಇಂದು ಈ ಸೌಲಭ್ಯ ಸಾಧ್ಯವಾಗಿದೆ. ಇಂದು ನಗರದಲ್ಲಿ ಬೇರುಬಿಟ್ಟಿರುವ ಉನ್ನತ ವಿದ್ಯಾಸಂಸ್ಥೆಗಳು, ತಮ್ಮ ವಿಭಾಗವನ್ನು ಹಳ್ಳಿಗಳಲ್ಲಿ ಸ್ಥಾಪಿಸುತ್ತಿದ್ದಾರೆ. ಇದರಿಂದಾಗಿ ಹಳ್ಳೀ ಮಕ್ಕಳಿಗೆ ಉನ್ನತ ಗುಣಮಟ್ಟದ, ನವೀನ ತಂತ್ರಜ್ಞಾನವುಳ್ಳ ಶಿಕ್ಷಣ ಸಿಗುತ್ತಿದೆ. ಇನ್ನು ಇವತ್ತಿನ ಕಂಪ್ಯೂಟರ್ ಜಗತ್ತಿನಲ್ಲಿ, ಕಂಪ್ಯೂಟರ್ ಬಳಕೆ ನಗರಕ್ಕೆ ಮಾತ್ರ ಸೀಮಿತಗೊಳ್ಳದೆ, ಹಳ್ಳಿಗಳಿಗೂ ಹರಡುತ್ತಿದೆ. ಇದರಿಂದಾಗಿ ಜಗತ್ತಿನಲ್ಲಿ ನಡೆಯುವ ಲಕ್ಷಾಂತರ ವಿದ್ಯಮಾನಗಳು ಕೂತಲ್ಲೆ ಕೈಗೆಟಕುತ್ತಿವೆ.

 

ಆದರೆ, ಎಲ್ಲೊ ಒಂದೆಡೆ ಈ ನಗರೀಕರಣದಿಂದಾಗುತ್ತಿರುವ ಅನುಕೂಲ ಹಾಗೂ ದುಷ್ಪರಿಣಾಮವನ್ನು ಒಂದು ತಕ್ಕಡಿಯಲ್ಲಿಟ್ಟು ತೂಗಿದಾಗ, ಅನುಕೂಲಕ್ಕಿಂತ ದುಷ್ಪರಿಣಾಮದ ಪ್ರಮಾಣವೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ, ನಗರೀಕರಣದ ಅನುಕೂಲವನ್ನು ಪಡೆದುಕೊಂಡು, ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಅತಿ ದೊಡ್ಡ ಜವಾಬ್ದಾರಿ, ಇಂದಿನ ಹಳ್ಳಿಗಳ ಮೇಲಿದೆ ಮತ್ತು ಈ ಹೊಣೆ ಹೊರುವಲ್ಲಿ ಇಂದಿನ ಯುವಪೀಳಿಗೆ ಅತಿ ಮುಖ್ಯ ಪಾತ್ರವನ್ನು ವಹಿಸಬೇಕಿದೆ.

1.

Posted by [email protected] on October 18, 2012 at 6:00 AM Comments comments (0)

ಸವಿ ನೆನಪಿನ ಬೆನ್ನಟ್ಟಿ....!!

 

 

 

ಜೀವನದ ಬಗ್ಗೆ ೧ ಸ್ಪಷ್ಟನೋಟ, ಕ್ಲಾಸಿನಲ್ಲಿ ಉತ್ಸುಕತೆಯಿಂದ ಕೇಳಿದ ಪಾಠ, ಆಗೊಮ್ಮೆ ಈಗೊಮ್ಮೆ ನಡುನಡುವೆ ಗುರುಗಳಿಗೆ ಕೊಡುತ್ತಿದ್ದ ಕಾಟ, ಸ್ನೇಹಿತರೊಂದಿಗಿನ ಆ ಜಾಲಿ ಒಡನಾಟ, ಪರೀಕ್ಷೆ ಹತ್ರ ಬರ್ತಿದೆ ಅಂದ್ರೆ ಆ ಪರದಾಟ, ಒಂದು ಒಳ್ಳೆ ನಾಟಕ ಕೊಡೋಕೆ ಮಾಡಿದ್ದ ಆ ಓಡಾಟ, ಎಲ್ಲರೊಂದಿಗೆ ಕೂತು ಮಾಡಿದ ಆ ಊಟ, ಒಂದೇ ಎರೆಡೇ, ಕಾಲೇಜಿನ ಆ ದಿನಗಳ ಬುತ್ತಿಯನ್ನು ತೆರೆದರೆ, ನವಿರು ನವಿರಾಗಿ ಬಿಚ್ಚಿಕೊಳ್ಳುತ್ತವೆ ಮಧುರ ಕ್ಷಣಗಳ ಆ ನೆನಪು!

 

ಕಾಲೇಜು ಒಂದು ಮೋಜಿನ ಮೇಜು ಎಂಬ ಇಮೇಜನ್ನ ತಮ್ಮ ಮನಸಿನಲ್ಲಿಟ್ಟುಕೊಂಡಿರುವ ಇಂದಿನ ಯುವಪೀಳಿಗೆಯವರು, ಯಾವಾಗ ಕಾಲೇಜಿನ ಕದತಟ್ಟುತ್ತಿವೋ ಅಂತ ಕಾಯ್ತಾ ಇರ್ತಾರೆ. ಯಾಕೆ ಹೀಗೆ? ಅಂತದ್ದೇನಿದೆ ಆ ‘ಕಾಲೇಜ್ lifeನಲ್ಲಿ’?

 

ಇದಕ್ಕುತ್ತರ, ತಮ್ಮ ಪೂರ್ವಾಗ್ರಹದ ಪರಿಕಲ್ಪನೆಯಿಂದ ಹೊರಬಂದು, ನಿಜವಾದ ಅರ್ಥದಲ್ಲಿ ಆ lifeನ್ನ ಅನುಭವಿಸಿದವರ ಬಳಿ ನಮಗೆ ಸಿಗುತ್ತದೆ. ಯೆಸ್ ಅಲ್ಲೊಂದು ಸಿಹಿ ಕನಸಿದೆ. ಓರಗೆಯವರೊಂದಿಗೆ ಹುಸಿ ಮುನಿಸಿದೆ, ಇದರ ನಡುವೆಯೂ ಆ ಸ್ನೇಹದ ಕಡಲಲ್ಲಿ ಮತ್ತೂ ಮೀಯಬಯಸುವ ಮನಸಿದೆ.. ಆ ಸ್ನೇಹವೆ ಹಾಗೆ, ತನ್ನ ಕಿರುನಗೆಯ ಕುಡಿನೋಟದಲ್ಲಿ ಕೈಚಾಚಿ ಎಂಥವರನ್ನು ತನ್ನೆಡೆಗೆ ಬಾಚಿ ತಬ್ಬುತ್ತದೆ. ಅದರ ಬೆಚ್ಚಗಿನ ಕಾವಿನಲ್ಲಿ ಆಶ್ರಯಿಸಿದವರಿಗೆ ವಿಶ್ವವೇ ಸುಂದರ ಸುಮಧುರ!

 

ಸಂಧ್ಯಾಕಾಲದಲ್ಲಿ ರಿಟೈಯರ್ಡ್ ಆದ ವ್ಯಕ್ತಿ ಹೇಗೆ ತಾನು ಸಾಗಿ ಬಂದ ಬದುಕಿನ ಪಯಣವನ್ನು ಮತ್ತೆ ಮತ್ತೆ ರಿವೈಂಡ್ ಮಾಡಿಕೊಂಡು ಖುಷಿಯನ್ನು ಅನುಭವಿಸುತ್ತಾನೊ, ಅದೇ ರೀತಿ ಕಾಲೇಜಿನ ಮೆಟ್ಟಿಲನ್ನು ಇಳಿದು professional ಅನ್ನೊ ಟೈಟಲ್ ನೇತಾಕಿಕೊಳ್ಳುವ ವಿದ್ಯಾರ್ಥಿ ಕೂಡ ತನ್ನ ಕಾಲೇಜ್ ದಿನಗಳ ಮೆಲುಕು ಹಾಕಿಕೊಳ್ಳುತ್ತಾ ಖುಷಿಯನ್ನು ಅನುಭವಿಸುತ್ತಾನೆ.

 

ಯಾರಾದ್ರೂ ಕೇಳಬಹುದು, ಯಾಕೆ ಕಾಲೇಜ್ lifeನಷ್ಟೇ professional life ಅನ್ನ ಅನುಭವಿಸಲಿಕ್ಕೆ ಸಾಧ್ಯವಿಲ್ಲವೇ? ಅಂತ. ಖಂಡಿತ ಆಗುತ್ತೆ. ಆದರೆ, ನಾವು ಆರಿಸಿಕೊಳ್ಳುವ ವೃತ್ತಿ ಬದುಕು ನಾವು ಇಷ್ಟಪಟ್ಟಿದ್ದಾದಾಗ ಮಾತ್ರ! ಇಲ್ಲದಿದ್ದರೆ ಪ್ರತಿ ಕ್ಷಣವೂ ಮನಸ್ಸು ಅದನ್ನ ಕಿತ್ತೊಗೆದು ಓಡಿಹೋಗಲು ಹಾತೊರೆಯುತ್ತಿರುತ್ತದೆ.ಒಮ್ಮೆ ಜವಾಬ್ದಾರಿ ಅನ್ನೊ ಮೂಟೆ(mooTe) ಬೆನ್ನೇರಿದ್ರೆ ಸಾಕು, ನಮ್ಮಲ್ಲಿನ ಆ ಹುಡುಗಾಟಿಕೆ, ಮುಗ್ಧತೆ ಎಲ್ಲದಕ್ಕೂ ಬ್ರೇಕ್ ಬೀಳುತ್ತೆ. ಅದರ ಬದಲಾಗಿ ಗಂಭೀರತೆ, ಸ್ಪರ್ಧಾತ್ಮಕ ಮನೋಭಾವ, ಸ್ವಾರ್ಥ, ಜಗತ್ತನ್ನೆ ಗೆಲ್ಲಬೇಕೆಂಬ ಹೆಬ್ಬಯಕೆ ಆ ಮೂಟೆಯನ್ನು ಹೊಕ್ಕು, ಮತ್ತಷ್ಟು ಬೆನ್ನು ಬಾಗುವಂತೆ ಮಾಡುತ್ತದೆ. ಇನ್ನು ಆ ಮೂಟೆ ಕೆಳಗಿಳಿಸಿ ಮೈಕೊಡವಿಕೊಳ್ಳುವಷ್ಟರಲ್ಲಿ ವಯಸ್ಸು ಜೀವನದ ಮುಕ್ಕಾಲು ಪಯಣವನ್ನು ಮುಗಿಸಿರುತ್ತದೆ. ಕೊನೆಗೆ ನಮ್ಮ ಬಳಿ ಉಳಿಯುವುದು ಅದೇ ಹಳೇ ನೆನಪುಗಳು, ಅದೇ ರಿಟೈರ್ಡ್ ಛೇರ್!

 

ಹೇಗೆ ವಸ್ತುಗಳು ಬಳಸದೆ ಹೋದರೆ ತುಕ್ಕು ಹಿಡಿದು ಹಾಳಾಗುತ್ತವೋ, ಅದೇ ರೀತಿ ನೆನಪುಗಳನ್ನು ಮೆಲುಕು ಹಾಕದೆ ಹೋದರೆ, ಮನಸ್ಸು ಜಿಡ್ಡಿಡಿಯುತ್ತದೆ.. ನೆನಪುಗಳು ಜೀವನಕ್ಕೆ ಸ್ಪೂರ್ತಿಯನ್ನು ನೀಡುತ್ತವೆ, ಅದನ್ನು ತಾಜಾವಾಗಿರಿಸಿದಷ್ಟು ಮನಸ್ಸು ಪ್ರಫುಲ್ಲವಾಗಿರುತ್ತೆ... ಬದುಕಿನ ಪ್ರತಿ ಹೆಜ್ಜೆಯಲ್ಲೂ ಇಂತ ಕಾಲೇಜ್ ದಿನಗಳ ನೆನಪುಗಳು, ಅಲ್ಲಿ ಬೆಳೆಸಿದ ಸ್ನೇಹಸಂಬಂಧಗಳು, ಕೊನೆವರೆಗೂ ಜೊತೆ ಉಳಿಸಿಕೊಂಡಿದ್ದಲ್ಲಿ ಸಂಧ್ಯಾಕಾಲದ life ಕಾಲೇಜ್ life ಆಗದೆ!?.